ಮದ್ರಾಸ್ -
	ಭಾರತದ ತಮಿಳುನಾಡು ರಾಜ್ಯದ ಒಂದು ಜಿಲ್ಲೆ, ರಾಜ್ಯ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಒಂದು ಕೈಗಾರಿಕಾ ಬಂದರು ನಗರ. ಮದ್ರಾಸ್ ಜಿಲ್ಲೆಯನ್ನು ಉತ್ತರದಲ್ಲಿ ಆಂಧ್ರಪ್ರದೇಶದ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳೂ ಪಶ್ಚಿಮದಲ್ಲಿ ತಮಿಳುನಾಡಿನ ಉತ್ತರ ಆರ್ಕಾಟ್, ದಕ್ಷಿಣದಲ್ಲಿ ದಕ್ಷಿಣ ಆರ್ಕಾಟ್ ಜಿಲ್ಲೆಗಳೂ ಪೂರ್ವದಲ್ಲಿ ಬಂಗಾಲಕೊಲ್ಲಿಯೂ ಸುತ್ತುವರಿದಿವೆ. ಈ ಜಿಲ್ಲೆಯ ವಿಸ್ತೀರ್ಣ 174 ಚಕಿಮೀ. ಜನಸಂಖ್ಯೆ 42,16,268 (2000). ಇದನ್ನು 1996ರಲ್ಲಿ ಚೆನ್ನೈ ಎಂದು ಮರು ನಾಮಕರಣ ಮಾಡಲಾಗಿದೆ. ಆದರೂ ಈಗಲೂ ಮದ್ರಾಸ್ ಎಂದು ಕರೆಯುತ್ತಿದ್ದಾರೆ. (ನೋಡಿ- ತಮಿಳು-ನಾಡು)

	ಮದ್ರಾಸ್ ನಗರ: ನಗರ ಪ್ರದೇಶ ಮದ್ರಾಸ್ ಮತ್ತು ಚೆಂಗಲಪಟ್ಟು ಜಿಲ್ಲೆಗಳಲ್ಲಿ ವಿಸ್ತರಿಸಿದೆ. ದಕ್ಷಿಣ ಭಾರತದ ಮೊದಲನೆಯ ಹಾಗೂ ಭಾರತದ ನಾಲ್ಕನೆಯ ದೊಡ್ಡ ನಗರವಿದು. ತಮಿಳಿನಲ್ಲಿ ಈ ನಗರವನ್ನು ಚೆನ್ನಪುರಿ, ಚನ್ನಪಟ್ಟಣ ಮತ್ತು ಚೆನ್ನೈ(ಶೆನ್ನೈ) ಎಂದೂ ಕರೆಯುವುದುಂಟು. ಭಾರತದ ಪೂರ್ವ ತೀರದ ಮುಖ್ಯ ಬಂದರು ನಗರವಾದ ಇದು ಕಲ್ಕತ್ತೆಯ ನೈರುತ್ಯಕ್ಕೆ ಸುಮಾರು 1368ಕಿಮೀ ದೂರದಲ್ಲಿ ಬಂಗಾಳಕೊಲ್ಲಿಯ ಪಶ್ಚಿಮದ ಕೋರಮಂಡಲ ತೀರದಲ್ಲಿ ಉ.ಅ.13.4 ಮತ್ತು ಪೂ.ರೇ. 80.14 ನಲ್ಲಿದೆ.

	ಮದ್ರಾಸ್ ನಗರದಲ್ಲಿ ಶೇಕಡ 62ರಷ್ಟು ಮಂದಿ ಶಿಕ್ಷಿತರು. ವಿಸ್ತೀರ್ಣ ಹಾಗೂ ಜನಸಂಖ್ಯೆ ದೃಷ್ಟಿಯಿಂದ ಈ ನಗರದಲ್ಲಿ ಮುಂಬಯಿ ಕಲ್ಕತ್ತಗಳಲ್ಲಿರುವಷ್ಟು ಸಂದಣಿ ಹಾಗೂ ಒತ್ತಡ ಇಲ್ಲ. ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವ ಭಾರತದ ಇತರ ಬೃಹತ್ ನಗರಗಳಲ್ಲಿ ಕಂಡುಬರುವಷ್ಟು ಇಲ್ಲಿ ಕಾಣಬರುವುದಿಲ್ಲ. ಮುಂಬಯಿ, ಕಲ್ಕತ್ತಗಳ ವಾಣಿಜ್ಯ ಮತ್ತು ಕೈಗಾರಿಕಾ ಸಮೃದ್ಧಿ ಮದ್ರಾಸಿಗಿಲ್ಲ. ನವದೆಹಲಿಯಂತೆ ಯೋಜನಾಬದ್ಧ ನಗರವೂ ಇಲ್ಲ. ಪುರಾತನ ಭಾರತದ ಕೆಲವೊಂದು ವಿಶಿಷ್ಟ ಸಂಪ್ರದಾಯ ಮತ್ತು ಆಧುನಿಕತೆಗಳೆರಡನ್ನೂ ಈ ನಗರದಲ್ಲಿ ಕಾಣಬಹುದು. ದಕ್ಷಿಣರೈಲ್ವೆ ಮತ್ತು ಮುಖ್ಯ ರಸ್ತೆಗಳ ಎರಡೂ ಬದಿಗಳಲ್ಲಿ ಬೆಳೆದಿದ್ದ ವಸತಿ ಹಾಗೂ ಕೈಗಾರಿಕಾ ಪ್ರದೇಶಗಳು ವಿಸ್ತೀರ್ಣಗೊಂಡು ಕೂಡಿಕೊಂಡಿವೆ. ಕೂವಮ್ ನದಿ ಈ ನಗರವನ್ನು ಹೆಚ್ಚು ಕಡಿಮೆ ಸಮಾನಾರ್ಧಗಳಲ್ಲಿ ಬೇರ್ಪಡಿಸುತ್ತದೆ. ಇದನ್ನು ದಕ್ಷಿಣದಲ್ಲಿ ಹರಿಯುವ ಅಡ್ವಾರ್ ನದಿಯೊಂದಿಗೆ ನಗರಮಧ್ಯದಲ್ಲಿ ಹರಡಿರುವ ಬಕಿಂಗ್‍ಹ್ಯಾಮ್ ಕಾಲುವೆ ಜೋಡಿಸುತ್ತದೆ. ಸೇಂಟ್ ಜಾರ್ಜ್ ಕೋಟೆಯ ಉತ್ತರಕ್ಕೆ ನಗರ ಮಧ್ಯದಲ್ಲಿರುವ ಜಾರ್ಜ್ ಟೌನ್ ಮತ್ತು ದಕ್ಷಿಣದಲ್ಲಿ ಟ್ರಿಪ್ಲಿಕೇನ್, ರಾಯಪೇಟಾ, ಮೈಲಾಪುರ, ಮಂದವಳ್ಳಿ ಮೊದಲಾದ ಪ್ರದೇಶಗಳಲ್ಲಿ ಜನವಸತಿ ಹೆಚ್ಚಿದೆ. ತೀರ ದಕ್ಷಿಣದಲ್ಲಿ ಗಾಂಧಿನಗರ, ಕಸ್ತೂರಬಾ ನಗರ, ಪಶ್ಚಿಮದಲ್ಲಿಯ ಅಣ್ಣಾನಗರ ಮೊದಲಾದ ಹೊಸ ಬಡಾವಣೆಗಳೂ ಇವೆ. 

	ಹವೆ: ಮದ್ರಾಸಿನ ಹವೆ ಕಲ್ಕತ್ತ, ಮುಂಬಯಿಗಳ ಹವೆಗಿಂತ ಹಿತಕರ. ಮಧ್ಯಾಹ್ನ ಪ್ರಾರಂಭವಾಗುವ ಸಮುದ್ರಗಾಳಿ ಸೆಖೆಯನ್ನು ಶಮನಗೊಳಿಸುತ್ತದೆ. ಮಧ್ಯಮ ಉಷ್ಣತೆ 33ಛಿ ಇರುವ ಅತಿ ಹೆಚ್ಚು ಸೆಖೆ ತಿಂಗಳು ಮೇ. ಮಧ್ಯಮ ಉಷ್ಣತೆ 24.ಛಿ ಇರುವ ತಂಪು ತಿಂಗಳು ಜನವರಿ. ವರ್ಷದಲ್ಲಿ ಸುಮಾರು 122 ಸೆ.ಮೀ ಮಳೆಯಾಗುತ್ತದೆ. 

	ಸಸ್ಯಗಳು, ಪ್ರಾಣಿಗಳು; ಮದ್ರಾಸಿನ ಸುತ್ತಮುತ್ತಲಿನ ವನ್ಯ ಪ್ರದೇಶಗಳಲ್ಲಿ ಮತ್ತು ನಗರದಲ್ಲಿ ತೆಂಗು, ತಾಳೆ, ಬೇವು, ಹಾಲಿವಾಣ, ಹೊಂಗೆ, ಹುಣಿಸೆ, ಶಂಕುಫಲಿ ಮತ್ತು ಆಲದ ಮರಗಳನ್ನು ಕಾಣಬಹುದು. ಕೆರೆ, ಹಸುರು, ಮುಂತಾದ ಹಾವುಗಳನ್ನೂ ಮ್ಯಾಗ್ ಪೈ, ಮರಕುಟಕ, ರಾಬಿನ್, ಕಿಂಗ್ ಫಿಶರ್ ಮೊದಲಾದ ಪಕ್ಷಿಗಳನ್ನೂ ಹೆಂಟಿಗೊದ್ದ, ಮುಂಗುಸಿ, ಮುಳ್ಳುಹಂದಿ ಇತ್ಯಾದಿ ಪ್ರಾಣಿಗಳನ್ನೂ ಕಾಣಬಹುದು. ಇಲ್ಲಿ ಜಿಂಕೆ ಮತ್ತು ಹಾವುಗಳ ರಕ್ಷಿತ ಉದ್ಯಾನಗಳಿವೆ.

	ಸಾರಿಗೆ : ನಗರದಲ್ಲಿ ಮೀಟರ್‍ಗೇಜ್ ಮತ್ತು ಬ್ರಾಡ್‍ಗೇಜ್ ರೈಲುಮಾರ್ಗಗಳಿವೆ. ನಗರಕ್ಕೆ ಕೆಲಸಕ್ಕಾಗಿ ದಿನವೂ ಬರುವ ಉಪನಗರವಾಸಿಗಳಿಗೆ ಸರ್ಬನ್ ರೈಲುವ್ಯವಸ್ಥೆಯಿದೆ. ಬಸ್ ಸಾರಿಗೆ ವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ಸೇರಿದೆ. ನಗರದಿಂದ ರಾಜ್ಯದ ಇತರ ಪ್ರದೇಶಗಳಿಗೂ ಹೊರರಾಜ್ಯಗಳಿಗೂ ಬಸ್ ವ್ಯವಸ್ಥೆಯಿದೆ. ಮದ್ರಾಸಿನಲ್ಲಿ ದಕ್ಷಿಣ ರೈಲ್ವೆಯ ಕೇಂದ್ರ ಆಡಳಿತ ಕಚೇರಿಯಿದೆ. ಇಲ್ಲಿಯ ಕೇಂದ್ರ ರೈಲುನಿಲ್ದಾಣದಿಂದ ಭಾರತದ ಎಲ್ಲ ಭಾಗಗಳಿಗೂ ರೈಲುಗಳ ಸಂಪರ್ಕವುಂಟು. ಮೀನಂಬಾಕಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತದ ಎಲ್ಲದೊಡ್ಡ ನಗರಗಳಿಗೂ ಸಿಂಗಪುರ, ಸಿಡ್ನಿ, ಕೊಲಂಬೋ ಮುಂತಾದ ವಿದೇಶೀ ನಗರಗಳಿಗೂ ವಿಮಾನ ಸಂಪರ್ಕವಿದೆ. ಮದ್ರಾಸಿಗೆ ಹಡಗುಗಳ ಸಂಪರ್ಕವೂ ಇದೆ. ಪ್ರಪಂಚದ ಅನೇಕ ರಾಷ್ಟ್ರಗಳ ಹಡಗುಗಳು ಇಲ್ಲಿಗೆ ಬರುತ್ತವೆ. 1876ರಲ್ಲಿ ಪೂರ್ತಿಯಾದ ಮದ್ರಾಸಿನ ಮಾನವನಿರ್ಮಿತ ಬಂದರು 1881ರಲ್ಲಿ ಸುಂಟರಗಾಳಿಯಿಂದಾಗಿ ನಾಶವಾಗಿ ಮತ್ತೆ 1896ರಲ್ಲಿ ಪುನನಿರ್ಮಿಸಲ್ಪಟ್ಟಿತು. 1901ರಲ್ಲಿ ಇದರ ವಿನ್ಯಾಸವನ್ನು ನವೀಕರಿಸಲಾಗಿದೆ. 
	
ಪ್ರೇಕ್ಷಣಿಯ ಸ್ಥಳಗಳಲ್ಲಿ ಮೈಲಾಪುರದ ಕಪಾಲೀಶ್ವರ ಹಾಗೂ ಟ್ರಿಪ್ಲಿಕೇನಿನ ಪಾರ್ಥಸಾರಥಿ ದೇವಾಲಯಗಳು ಪ್ರಸಿದ್ಧವಾದವು. ಬ್ರಿಟಿಷರ ಕಾಲದ ಕಟ್ಟಡಗಳಲ್ಲಿ ದಖ್ಖನ್ ಮಹಮ್ಮದೀಯ ಶೈಲಿಯಲ್ಲಿರುವ ಚೀಪಾಕ್ ಅರಮನೆ ಮತ್ತು ವಿಶ್ವವಿದ್ಯಾಲಯದ ಸೆನೆಟ್ ಹೌಸ್, ಇಂಡೊ ಸಾರಾಸೆನಿಕ ಶೈಲಿಯಲ್ಲಿರುವ ವಿಕ್ಟೋರಿಯ ತಾಂತ್ರಿಕ ಸಂಸ್ಥೆ ಮತ್ತು ಉಚ್ಚನ್ಯಾಯಾಲಯದ ಕಟ್ಟಡಗಳು ಆಕರ್ಷಣೀಯವಾಗಿವೆ. 

	ಮೌಂಟ್‍ರೋಡಿನಲ್ಲಿ ಅಣ್ಣಾಸಾಲೈ ವಿಮಾನಸಂಸ್ಥೆಯ ಒಂದು ಆಧುನಿಕ ಗಗನಚುಂಬಿ ಕಟ್ಟಡವಿದೆ. ಸುಮಾರು 49 ಮೀಟರ್ ಎತ್ತರವಿರುವ ದೀಪಗೃಹ, 16ನೆಯ ಶತಮಾನದ ಇಟಾಲಿಯನ್ ಪುನರುಜ್ಜೀವನ ಪದ್ಧತಿಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನ ಕಟ್ಟಡ, ದೊಡ್ಡ ಮಸೀದಿ ಇವು ನೋಡತಕ್ಕ ಕಟ್ಟಡಗಳು. ಗಿಂಡಿಗೆ ಸಮೀಪದಲ್ಲಿ ಗಾಂಧಿ ಸ್ಮಾರಕ ಕಟ್ಟಡವಿದೆ.

	ಕೈಗಾರಿಕೆ : ಮದ್ರಾಸಿನಲ್ಲಿ 1874ರಲ್ಲಿ ಸ್ಥಾಪಿತವಾದ ದಿ ಬಕಿಂಗ್ ಹ್ಯಾಮ್ ಅಂಡ್ ಕರ್ನಾಟಕ ಮಿಲ್ಸ್ ಒಂದು ಪ್ರಸಿದ್ಧ ಬಟ್ಟೆ ತಯಾರಿಕಾ ಕಾರ್ಖಾನೆ, ರೈಲ್ವೆ ಡಬ್ಬಿಗಳನ್ನು ನಿರ್ಮಿಸುವ ಇಂಟಿಗ್ರೇಲ್ ಕೋಚ್ ಫ್ಯಾಕ್ಟರಿಯನ್ನು 1953ರಲ್ಲಿ ತೆರೆಯಲಾಯಿತು. ಚಲನಚಿತ್ರಗಳ ಉದ್ಯೋಗ 1930ರಲ್ಲಿ ಪ್ರಾರಂಭವಾಯಿತು. ಇಂದು ಮದ್ರಾಸ್ ಚಲನಚಿತ್ರ ತಯಾರಿಕೆಯ ವಿವಿಧ ಘಟಕಗಳನ್ನು, ಹೊಂದಿರುವ ಮುಖ್ಯನಗರ. ಬೈಸಿಕಲ್ಲುಗಳ ತಯಾರಿಕೆ 1950ರಿಂದ ನಡೆಯುತ್ತಿದೆ. ಸ್ವಯಂಚಾಲಿತ ವಾಹನಗಳ ಮತ್ತು ಮೋಟಾರು ಸೈಕಲ್ಲುಗಳ ಬಿಡಿಭಾಗಗಳನ್ನು ಜೋಡಿಸುವ ಕೈಗಾರಿಕೆಯೂ 1950ರಿಂದಲೇ ಪ್ರಾರಂಭವಾಯಿತು. ಸಣ್ಣಕೈಗಾರಿಕೆಗಳಿಗೆ ಗಿಂಡಿಯಲ್ಲಿಯೂ ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಅಂಬತ್ತೂರಿನಲ್ಲಿಯೂ ವ್ಯವಸ್ಥೆಗಳಿವೆ. ಎನ್ನೋರಿನಲ್ಲಿ ತೈಲಶುದ್ಧೀಕರಣದ ಕಾರ್ಖಾನೆಯಿದೆ. ದಕ್ಷಿಣದಲ್ಲಿಯೇ ಹೆಚ್ಚು ಪುಸ್ತಕ ಮತ್ತು ದೈನಿಕ ಹಾಗೂ ನಿಯತಕಾಲಿಕಗಳ ಪ್ರಕಟಣಾ ಸಂಸ್ಥೆಗಳು ಮದ್ರಾಸಿನಲ್ಲಿವೆ. ಧರ್ಮವನ್ನು ಹದಗೊಳಿಸುವುದೂ ಇಲ್ಲಿ ಒಂದು ಮುಖ್ಯಕೈಗಾರಿಕೆ. 

	ವ್ಯಾಪಾರ ಮತ್ತು ವಾಣಿಜ್ಯ : ಚರ್ಮ, ಕಬ್ಬಿಣದ ಅದುರು, ಗಿರಣಿ ಮತ್ತು ಕೈಮಗ್ಗ, ಬಟ್ಟೆ, ಅರಳೆಯ ನೂಲು, ನೆಲಗಡಲೆ, ಮೈಕಾ, ಈರುಳ್ಳಿ, ಮೆಣಸಿನಕಾಯಿ, ಕಾಫಿ, ಮಾನವ ಕೂದಲು, ತಾಳೆನಾರು ಮತ್ತು ಗಂಧದ ಎಣ್ಣೆ ಇಲ್ಲಿಂದ ರಫ್ತಾಗುವ ಸರಕುಗಳು. ಮುಖ್ಯವಾದ ಆಮದುಗಳೆಂದರೆ ಗೋಧಿ, ಯಂತ್ರ ಸಾಮಗ್ರಿ, ಕಬ್ಬಿಣ ಮತ್ತು ಉಕ್ಕು, ಅಮೋನಿಯಮ್ ಸಲ್ಫೇಟ್, ಹತ್ತಿ ಛಾಪಾಕಾಗದ, ಯೂರಿಯಾ, ಸೋಯಾಬೀನ್ ಎಣ್ಣೆ, ಔಷಧ, ಪೆಟ್ರೋಲಿಯಮ್ ಉತ್ಪಾದನೆಗಳು ಹಾಗೂ ರಾಕ್‍ಫಾಸ್ಫೇಟ್, ದಿ ತಮಿಳುನಾಡ್ ಇಂಡಸ್ಟ್ರಿಯಲ್ ಇನ್‍ವೆಸ್ಟ್‍ಮೆಂಟ್ ಕಾರ್ಪೊರೇಷನ್ ಮೊದಲಾದ ಸಂಸ್ಥೆಗಳು ಮತ್ತು ಸಹಕಾರೀ ಬ್ಯಾಂಕಿಂಗ್ ಸಂಸ್ಥೆಗಳು ಸಣ್ಣ ಹಾಗೂ ದೊಡ್ಡ ವ್ಯಾಪಾರಸ್ಥರಿಗೆ ಸಹಾಯ ಒದಗಿಸುತ್ತವೆ. ದಿ ಮದ್ರಾಸ್ ಛೇಂಬರ್ ಆಫ್ ಕಾಮರ್ಸ್, ದಿ ಆಂಧ್ರ ಛೇಂಬರ್ ಆಫ್ ಕಾಮರ್ಸ್, ದಿ ಆಂಧ್ರ ಛೇಂಬರ್ ಆಫ್ ಕಾಮರ್ಸ್ ಅನೇಕ ಖಾಸಗಿ ಮತ್ತು ರಾಷ್ಟ್ರೀಯ ಬ್ಯಾಂಕುಗಳೂ ಇಲ್ಲಿಯ ವ್ಯಾಪಾರ ಯತ್ನಗಳಿಗೆ ನೆರವು ನೀಡುತ್ತಿವೆ.

	ಮದ್ರಾಸ್ ನಗರದಲ್ಲಿ ರಾಜ್ಯ ಶಾಸನ ಸಭೆ. ಸೆಕ್ರೆಟೇರಿಯಂಟ್ ಮತ್ತು ಮುಖ್ಯ ಆಡಳಿತ ಕಚೇರಿಗಳಿವೆ. ರಾಜ್ಯಪಾಲರ ವಸತಿ ಗಿಂಡಿಯಲ್ಲಿದೆ. ನುಂಗಂಬಾಕಂನ ಶಾಸ್ತ್ರೀಭವನದಲ್ಲಿ ಸುಮಾರು 34 ಕೇಂದ್ರ ಸರ್ಕಾರದ ಕಚೇರಿಗಳಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಾರ್ಯಾಲಯ ಪಾರ್ಕ್‍ಟೌನಿನಲ್ಲೂ ಅಕೌಂಟೆಟ್ ಜನರಲ್ ಮತ್ತು ಪೋಸ್ಟ್ ಮಾಸ್ಟರ್ ಜನರಲ್‍ರ ಕಚೇರಿಗಳು ಮೌಂಟ್‍ರೋಡಿನಲ್ಲೂ ಇವೆ. ವರಮಾನ ಮತ್ತು ಕೇಂದ್ರ ಅಬಕಾರೀ ಕಚೇರಿಗಳು ನುಂಗಂಬಾಕಂನಲ್ಲಿವೆ. ಭಾರತೀಯ ಸೈನ್ಯದ ದಕ್ಷಿಣ ಅಧಿಪತ್ಯದ ಮುಖ್ಯ ಕಾರ್ಯಾಲಯ ಸೆಂಟ್‍ತಾಮಸ್ ಮೌಂಟಿನಲ್ಲಿದೆ. ಆಕಾಶವಾಣಿ ಕೇಂದ್ರವಿದೆ. ನಗರ ಸಭೆಯ ಆಡಳಿತವಿದೆ. 

	ಮದ್ರಾಸ್ ನಗರಕ್ಕೆ ವಾಯವ್ಯದಲ್ಲಿ ಸುಮಾರು 18 ಕಿಮೀ ದೂರದಲ್ಲಿರುವ ರೆಡ್ ಹಿಲ್ಸ್ ಸರೋವರದಿಂದ ನೀರಿನ ಪೂರೈಕೆಯಾಗುತ್ತದೆ. ಸರೋವರಕ್ಕೆ ಕೋರ್ತಲಿಯಾರ್ ನದಿಯ ಮೇಲಿನ ಪುಂಡಿ ಮತ್ತು ತಾಮ್ರಪಕ್ಕಮ್ ಜಲಾಶಯಗಳ ಕಾಲುವೆಗಳ ಮೂಲಕ ನೀರು ಬರುತ್ತದೆ. ಮಳೆ ಕಡಿಮೆಯಾದ ವರ್ಷಗಳಲ್ಲಿ ನಗರ ನೀರಿನ ತೀವ್ರ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಬೇಸಿನ ಬ್ರಿಡ್ಜ್ ಮತ್ತು ಎನ್ನೋರ್ ಥರ್ಮಲ್ ಸ್ಟೇಷನ್ನುಗಳು ವಿದ್ಯುತ್ತನ್ನು ಒದಗಿಸುತ್ತವೆ. ನಗರದಲ್ಲಿ ಅನೇಕ ಸರ್ಕಾರಿ ಮತ್ತು ಪುರಸಭಾ ಆಸ್ಪತ್ರೆಗಳಿವೆ. ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಎದುರಿಗೆ ಇರುವ ಮದ್ರಾಸ್ ಜನರಲ್ ಆಸ್ಪತ್ರೆ ಬಲು ಹಿಂದಿನದು, ಬಲು ದೊಡ್ಡದು ಕೂಡ. ರಾಯಪೇಟಾ ಆಸ್ಪತ್ರೆ ಮತ್ತು ಕಿಲ್ಪಾಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇವು ಸಹ ದೊಡ್ಡ ಸರ್ಕಾರೀ ಆಸ್ಪತ್ರೆಗಳು. ನಗರದಲ್ಲಿ ನಗರದ ಆರೋಗ್ಯ ಇಲಾಖೆಗೆ ಸೇರಿದ ಒಂದು ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಯಿದೆ. ನಗರದದಲ್ಲಿ ಸಾಕಷ್ಟು ಅಗ್ನಿಶಾಮಕ ದಳಗಳೂ ಮತ್ತು ಶಾಂತಿ ರಕ್ಷಣೆಗಾಗಿ ಪೊಲೀಸ್ ಸ್ಟೇಷನ್ನುಗಳೂ ಇವೆ. ಈ ಬಗೆಯ ಸಾರ್ವಜನಿಕ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಲೇ ಹೋಗುತ್ತಿದೆ. ಅದರೆ ಈ ನಗರದ ಬೆಳೆವಣಿಗೆ ತೀವ್ರವಾಗಿರುವಂತೆ ಸೌಕರ್ಯಗಳನ್ನು ಅಷ್ಟೇ ತೀವ್ರವಾಗಿ ಒದಗಿಸಲು ಆಗದೆ ಅದರಲ್ಲಿ ಕೊರತೆ ಇದ್ದೇ ಇರುತ್ತದೆ. ಇದು ಯಾವ ಹಿಡಿತವೂ ಇಲ್ಲದೆ ವಿಸ್ತಾರಗೊಳ್ಳುವ ಎಲ್ಲ ನಗರಗಳ ಪರಿಸ್ಥಿತಿ.

	ಶಿಕ್ಷಣ : ಸರ್ಕಾರ, ಪುರಸಭೆ, ಕ್ರೈಸ್ತ ಮತ್ತು ರಾಮಕೃಷ್ಣ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢಶಿಕ್ಷಣ ವೀಯುವ ಅನೇಕ ಶಾಲೆಗಳಿವೆ. ಉಚ್ಚಶಿಕ್ಷಣ ನೀಡುವ ವಿವಿಧ ಕಾಲೇಜುಗಳೂ ವೈದ್ಯಕೀಯ, ಎಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳೂ ವಿಜ್ಞಾನ ಮತ್ತು ಕಲಾ ಕಾಲೇಜುಗಳೂ ಕರ್ನಾಟಕ ಸಂಗೀತ ಕಾಲೇಜು, ಕಲಾಕ್ಷೇತ್ರ (ನಾಟ್ಯಶಾಲೆ) ಕೈಕಸುಬುಗಳ ಕಾಲೇಜು ಮತ್ತು ಶಿಕ್ಷಕರ ತರಬೇತು ಕಾಲೇಜುಗಳೂ ಇವೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸಸ್ಯರೋಗ ವಿಜ್ಞಾನ, ಗಣಿತ, ಭೌತವಿಜ್ಞಾನ, ಜೀವಭೌತವಿಜ್ಞಾನ ಮತ್ತು ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಮುಂದುವರಿದ ಸಂಶೋಧನೆಗೆ ಅವಕಾಶವಿದೆ. ದಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂದ್ರ ಧರ್ಮ ಸಂಶೋಧನಾ ಸಂಸ್ಥೆ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯ ಪ್ರಾದೇಶಿಕ ಪ್ರಯೋಗಶಾಲೆಗಳೂ ಇತರ ವೈಜ್ಞಾನಿಕ ಸಂಸ್ಥೆಗಳೂ ಇಲ್ಲಿವೆ. ದಕ್ಷಿಣಭಾರತ ಹಿಂದೀ ಪ್ರಚಾರ ಸಭೆ ಅನೇಕ ಪಠ್ಯಪುಸ್ತಕಗಳನ್ನೂ ಇತರ ಕೃತಿಗಳನ್ನೂ ಪ್ರಕಟಿಸುತ್ತಿದ್ದು ಹಿಂದೀ ಭಾಷೆಯ ಪ್ರಚಾರ ನಡೆಸುತ್ತಿದೆ.

	ಸಾಂಸ್ಕøತಿಕ ಸಂಸ್ಥೆಗಳು. ಮನರಂಜನೆ : ಮದ್ರಾಸ್ ಸಂಗೀತ ಅಕಾಡೆಮಿ, ಕರ್ನಾಟಕ ಸಂಗೀತಕ್ಕೆ ಉತ್ತೇಜನ ನೀಡುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಅಡ್ಯಾರಿನ ಕಲಾಕ್ಷೇತ್ರ ಅಭಿಜಾತ ನಾಟ್ಯ ಮತ್ತು ಸಂಗೀತ ಕಲೆಗಳ ಕೇಂದ್ರ. ಕೋಡಂಭಾಕಮ್ ಅನೇಕ ಚಲನಚಿತ್ರ ಸುಡಿಯೋಗಳಿವೆ ಮೌಂಟ್‍ರೋಡಿನಲ್ಲಿರುವ ಜೆಮಿನಿ ಸ್ಟುಡಿಯೋ ಸುಪ್ರಸಿದ್ಧ. ತಮಿಳು, ಕನ್ನಡ, ತೆಲಗು ಮತ್ತು ಹಿಂದೀ ಚಲನಚಿತ್ರಗಳು ಇಲ್ಲಿ ತಯಾರಾಗುತ್ತವೆ. ಕೋಡಂಬಾಕಂ ಅನ್ನು ದಕ್ಷಿಣ ಭಾರತದ ಹಾಲಿವುಡ್ ಎನ್ನುವುಂಟು. ಚಿಲ್ರ್ಡನ್ಸ್ ಥಿಯೇಟರ್, ಅಣ್ಣಾಮಲೈ, ಮನ್ರಮ್ ಮತ್ತು ಮೂಸಿಯಮ್ ಥಿಯೇಟರ್ ಜನಪ್ರಿಯ ನಾಟಕ ಮಂದಿರಗಳು ಎಗ್ಮೋರಿನಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ತಮಿಳುನಾಡಿನ ಪುರಾತನವಸ್ತು, ಇತಿಹಾಸ, ಸಸ್ಯ ಮತ್ತು ಪ್ರಾಣಿಜೀವನ, ಭೂಗರ್ಭ ಹಾಗೂ ಮಾನವಕುಲಗಳನ್ನು ಚಿತ್ರಿಸುವ ಸಂಗ್ರಹಗಳಿವೆ. ಇಲ್ಲಿರುವ ಕಂಚಿನ ಮೂರ್ತಿಗಳು ಅತ್ಯಾಕರ್ಷಕವಾಗಿವೆ. ಇದರ ಸಮೀಪದಲ್ಲಿ ಚಿತ್ರಶಾಲೆಯೊಂದಿದೆ. ಇದರಲ್ಲಿ ಬೆಲೆಬಾಳುವ ಉತ್ತಮ ಚಿತ್ರಗಳ ಸಂಗ್ರಹವಿದೆ. ಕೋಟೆಯ ವಸ್ತ್ರು ಸಂಗ್ರಹಾಲಯದಲ್ಲಿ ಈಸ್ಟ್ ಇಂಡಿಯಾ ಕಂಪನಿ ಕಾಲದ ವಸ್ತು ವಿಶೇಷಗಳನ್ನು ನೋಡಬಹುದು. ವಿಶ್ವವಿದ್ಯಾಲಯದ ಗ್ರಂಥಾಲಯ ಕನ್ನೆಮರಾ ಸಾರ್ವಜನಿಕ ವಾಚನಾಲಯ ಮುಂತಾದವುಗಳಿವೆ. ಥಿಯಾಸಾಫಿಕಲ್ ಸೊಸೈಟಿಯಾ ಕೇಂದ್ರ ಕಾರ್ಯಾಲಯ ಅಡ್ಯಾರಿನಲ್ಲಿದೆ. ಅದರ ವಾಚಾನಾಲಯ ಮತ್ತು ಉದ್ಯಾನವನ ಪ್ರಸಿದ್ಧ. ಈ ಉದ್ಯಾನದಲ್ಲಿರುವ ಒಂದು ದೊಡ್ಡ ಆಲದಮರ ಪ್ರವಾಸಿಗಳನ್ನು ಆಕರ್ಷಿಸುತ್ತಿದ್ದು ಅದು ಭಾರತದಲ್ಲಿ ಗಾತ್ರ ದೃಷ್ಟಿಯಿಂದ ಎರಡನೆಯದೆನ್ನಲಾಗಿದೆ. ಮದ್ರಾಸಿನ ಉಸುಕಿನ ಮರೀನಾ ತೀರ ಪ್ರಪಂಚದಲ್ಲಿರುವ ದೊಡ್ಡ ಸಾಗರ ತೀರಗಳಲ್ಲಿ ಒಂದು. ಆದರೆ ಒಂದು ತುದಿಗಿರುವ ಅಣ್ಣಾಚೌಕ ಸುಂದರ ಸ್ಮಾರಕ ಉದ್ಯಾನವನ. ಹತ್ತಿರವೇ ಒಂದು ಈಜುಕೊಳ ಮತ್ತು ಜಲಚರ ಪ್ರಾಣಿ ಸಂಗ್ರಹಾಲಯವಿದೆ. ಮರೀನಾ ತೀರ ಸಂಜೆಯ ಸಮಯಕ್ಕೆ ಜನರಿಂದ ತುಂಬಿ ಹೋಗುತ್ತದೆ. ಬೇಸಗೆಯಲ್ಲಂತೂ ಜನಸಂದಣಿ ವಿಶೇಷವಾಗಿರುತ್ತದೆ. ನಗರ ಪೀಪಲ್ಸ್ ಪಾರ್ಕ್, ನೇಪಿಯರ್ ಪಾರ್ಕ್, ರಾಬಿನ್‍ಸನ್ ಪಾರ್ಕ್ ಮೊದಲಾದ ದೊಡ್ಡ ಉದ್ಯಾನಗಳನ್ನೂ ಹಲವಾರು ಸಣ್ಣ ಸಣ್ಣ ಉದ್ಯಾನಗಳನ್ನೂ ಒಂದು ಪ್ರಾಣಿ ಸಂಗ್ರಹಾಲಯವನ್ನೂ ಹೊಂದಿದೆ. ವಿದೇಶಿ ಕ್ರಿಕೆಟ್ ತಂಡಗಳು ಭಾರತಕ್ಕೆ ಬಂದಾಗಲೆಲ್ಲ ಇಲ್ಲಿಯ ಚೇಪಾಕ್ ಮೈದಾನದಲ್ಲಿ ಒಂದು ಟೆಸ್ಟ್ ಪಂದ್ಯ ನಡೆಯುತ್ತದೆ. ಕ್ರಿಕೆಟ್ ಮತ್ತು ಅನಂತರ ಕ್ರಮವಾಗಿ ಟೆನ್ನಿಸ್, ಪುಟ್‍ಬಾಲ್, ಬ್ಯಾಸ್ಕೆಟ್ ಬಾಲ್, ಮತ್ತು ಹಾಕಿ ಜನಪ್ರಿಯ ಕ್ರೀಡೆಗಳು ಕಾರ್ಪೊರೇಷನ್ ಸ್ಟೇಡಿಯಮ್ ಮತ್ತು ಎಗ್ಮೋರಿನಲ್ಲಿರುವ ಪೊಲೀಸ್ ಸ್ಟೇಡಿಯಮ್‍ಗಳು ಚೇಪಾನ್ ಸ್ಟೇಡಿಯಮ್ಮಿ ಅನಂತರ ಬರುವ ದೊಡ್ಡ ಕ್ರೀಡಾ ರಂಗಗಳು. ಗಿಂಡಿಯಲ್ಲಿ ಕುದುರೆ ಜೂಜು ನಡೆಯುತ್ತದೆ. 

	ರಾಷ್ಟ್ರೀಯ ದೈನಿಕ ಹಿಂದು, ಇಂಡಿಯನ್ ಎಕ್ಸ್‍ಪ್ರೆಸ್, ಸಾಯಂಕಾಲ ಹೊರಡುವ ಪತ್ರಿಕೆ ಮೇಲ್ ಇಂಗ್ಲಿಷಿನಲ್ಲಿ, ತಮಿಳಿನಲ್ಲಿ ಸ್ವದೇಶಮಿತ್ರನ್, ದಿನಮಣಿ ಮತ್ತು ದಿನತಂತಿ ಮೊದಲಾದ ದೈನಿಕಗಳು ಮತ್ತು ನಿಯತಕಾಲಿಕಗಳಾದ ಆನಂದವಿಕಟನ್, ಕಲ್ಕಿ, ಕುಮುದಮ್ ಮೊದಲಾದವು ಇಲ್ಲಿಂದ ಪ್ರಕಟವಾಗುತ್ತಿದ್ದು. 

	ಇತಿಹಾಸ : ಪಾಶ್ಚಾತ್ಯ ಪ್ರಭಾವ ತೀರ ಕಡಿಮೆ ಕಂಡುಬರುವ ಮದ್ರಾಸ್ ನಗರ ಭಾರತದ ಅತಿ ಪ್ರಾಚೀನ ಐರೋಪ್ಯ ನೆಲೆಯಾಗಿತ್ತೆಂಬುದು ವಿರೋಧಾಭಾಸವಾಗಿದೆ. ಡೌಟಿಂಗ್ ತಾಮಸ್ ಎಂಬಾತ ಭಾರತಕ್ಕೆ ಧರ್ಮ ಪ್ರಚಾರಕನಾಗಿ ಬಂದು ಮದ್ರಾಸಿನ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸೇಂಟ್‍ತಾಮಸ್ ಗುಡ್ಡದ ಮೇಲೆ ಕ್ರಿ. ಶ. 78ರಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ. ಈಗ ಜನವಸತಿ ಹೆಚ್ಚಾಗಿರುವ ನಗರ ಪ್ರದೇಶಗಳಾದ ಮೈಲಾಪುರ, ಟ್ರಿಪ್ಲಿಕೇನ್ (ತಿರುವಳ್ಳಿಕ್ಕೇಣಿ), ತಿರುವೊಟ್ಟಿಯೂರು ಮೊದಲಾದವು ಇರುವಲ್ಲಿ 3-4ನೆಯ ಶತಮಾನದಲ್ಲಿ ಅದೇ ಹೆಸರುಗಳ ದೇವಾಲಯಗಳ ಊರುಗಳಿದ್ದವು. 15 ನೆಯ ಶತಮಾನದಲ್ಲಿ ಪೋರ್ಚುಗೀಸರು ಮೈಲಾಪುರದ ಹತ್ತಿರ ಕಾರ್ಖಾನೆಯೊಂದನ್ನು ಕಟ್ಟಿಸಿದ್ದರು. ಅವರು ಕಟ್ಟಿಸಿದ ಸ್ಯಾನ್ ತೋಮಿನಲ್ಲಿರುವ ಸ್ಯಾನತೋಮನ ಆರಾಧನೆಮಂದಿರ ಡೌಟಿಂಗ್ ತಾಮಸನ ಹೆಸರನ್ನು ಉಳಿಸಿದೆ. ಈಗ ಸೇಂಟ್ ಜಾರ್ಜ್ ಕೋಟೆಯಿರುವ ಪ್ರದೇಶದಲ್ಲಿ ಮೀನುಗಾರರ ಗ್ರಾಮ ಹಾಗೂ ಉಸುಕುಮಯ ಕೊಂಪೆಯಾಗಿದ್ದ ಚನ್ನಪಟ್ಟಣವಿತ್ತು. ಅದನ್ನು ಫ್ರಾನ್ಸಿಸ್ ಡೇ ಎಂಬಾತ 1639ರಲ್ಲಿ ವ್ಯಾಪಾರ ಕೋಠಿಗಾಗಿ ಆಗಿನ ಚಂದ್ರಗಿರಿಯ ರಾಜನಿಂದ ಗೇಣಿಗೆ ಪಡೆದುಕೊಂಡ. ಮರುವರ್ಷ ಸೇಂಟ್ ಜಾರ್ಜ್ ಕೋಟೆ ಕಟ್ಟಡ ಪ್ರಾರಂಭವಾಗಿ 1653ರಲ್ಲಿ ಕೊನೆಗೊಂಡಿತು. ಇಂಗ್ಲಿಷ್ ವರ್ತಕರು ತಾವು ಕಟ್ಟಿಸತೊಡಗಿದ್ದ ಕೋಟೆಯ ನೆರೆಯಲ್ಲಿ ನಾಡಿನ ವರ್ತಕರನ್ನೂ ನೇಕಾರರನ್ನೂ ಆಹ್ವಾನಿಸಿದರು. ಮುಂದೆ ಸೇಂಟ್‍ಜಾರ್ಜ್ ಕೋಟೆ ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರ ಸ್ಥಳವೂ ಕೋರಮಂಡಲ ತೀರದ ಪ್ರಮುಖ ವ್ಯಾಪಾರ ನಿಲ್ದಾಣವೂ ಆಯಿತು. ಪೂರ್ವದ ಮೊತ್ತ ಮೊದಲಿನ ಮದ್ರಾಸ್ ಕಾರ್ಪೊರೇಷನ್ 1687 ರಲ್ಲಿ ಪೌರಸಭಾಧಿಕಾರ ಪಡೆಯಿತು. 1746ರಲ್ಲಿ ಫ್ರೆಂಚರ ಡೂಪ್ಲೆ ಅದನ್ನು ಗೆದ್ದುಕೊಂಡ. ಅನಂತರ 1748ರ ತನಕ ಫ್ರೆಂಚರ ಆಡಳಿತ ದಲ್ಲುಳಿದು ಆ ಬಳಿಕ ಐಕ್ಸ್-ಲಾ ಚಾಪೆಲ್ಲನ ಒಡಂಬಡಿಕೆಯನುಸಾರ ಇಂಗ್ಲಿಷರಿಗೆ ಮರಳಿತು. 1749ರ ಸುಮಾರಿಗೆ ಕಂಪನಿ ಕೋಟೆಯ ಸುತ್ತ 8 ಚ.ಕಿ.ಮೀ ಪ್ರದೇಶದ ಮೇಲೆ ಆಡಳಿತ ಪಡೆದಿತ್ತು. ಆರಂಭದ ದಿನಗಳಲ್ಲಿ ವೈಟ್ ಟೌನ್ ಎನ್ನಲಾಗುತ್ತಿದ್ದ ಕೋಟೆಯೊಳಗೆ ಇಂಗ್ಲಿಷ್ ವರ್ತಕರು ವಾಸಿಸುತ್ತಿದ್ದರು. ತಮ್ಮ ಸಂಖ್ಯೆ ಮತ್ತು ವ್ಯಾಪಾರ ಬೆಳೆದಂತೆ ಅವರು ನುಂಗಮ್ ಬಾಕಮ್, ಅಡ್ಯಾರ್ ಮತ್ತು ಕಿಲ್ಪಾಕ್ ಮೊದಲಾದ ಪ್ರದೇಶಗಳಲ್ಲಿ ಹರಡಿಕೊಂಡರು. ಭಾರತೀಯರ ವಸತಿಯಾಗಿದ್ದ ಬ್ಲ್ಯಾಕ್ ಟೌನ್ (ಈಗಿನ ಜಾರ್ಜ್‍ಟೌನ್) ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನವಸತಿ ಹೆಚ್ಚಿ ನಗರದ ವಿಸ್ತೀರ್ಣ 53.82 ಚಕಿಮೀ ಇತ್ತು. 1931ರಲ್ಲಿ ಅದು ಸುಮಾರು 60-36 ಚ.ಕಿ.ಮೀ ಏರಿತು. 1946ರಲ್ಲಿ ಜನಸಂಮರ್ದವನ್ನು ತಡೆಯಲು ದಕ್ಷಿಣ ಮತ್ತು ಪಶ್ಚಿಮಗಳಲ್ಲಿದ್ದ ಗ್ರಾಮಪ್ರದೇಶಗಳನ್ನು ಮದ್ರಾಸ್ ನಗರಕ್ಕೆ ಸೇರಿಸಲಾಯಿತು. ಉತ್ತರದಲ್ಲಿ ತಿರುವೊಟ್ಟಿಯೂರು ಮತ್ತು ಎನ್ನೊರ್, ವಾಯವ್ಯದಲ್ಲಿ ಆವಡಿ ಮತ್ತು ಅಂಬತ್ತೂರು. ಪಶ್ಚಿಮದಲ್ಲಿ ಕೋಡಂಬಾಕಮ್, ನೈರುತ್ಯದಲ್ಲಿ ನಂದನಬಾಕಮ್ ಮತ್ತು ಗಿಂಡಿ ಕೈಗಾರಿಕಾ ಪ್ರದೇಶಗಳಾಗಿ ಬೆಳೆದಿವೆ.											
	  (ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ